Radius: Off
Radius:
km Set radius for geolocation
Search

216 ಗ್ರಾಮದಲ್ಲಿ ಕುಡಿವ ನೀರಿಗೆ ತೊಂದರೆ ಸಾಧ್ಯತೆ

ಶಿವಮೊಗ್ಗ: ಬೇಸಿಗೆಯಲ್ಲಿ ಜಿಲ್ಲೆಯ 216 ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಬಹುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬೇಸಿಗೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಯಾವುದೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಸ್ತುತ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸುತ್ತಿಲ್ಲ. ಬೇಸಿಗೆಯಲ್ಲಿ ನೀರಿನ ತೊಂದರೆ ಉಂಟಾಗುವ ಗ್ರಾಮಗಳನ್ನು ಗುರುತಿಸಲಾಗಿದೆ. ಅಂತಹ ಗ್ರಾಮಗಳಲ್ಲಿ ಕುಡಿಯುವ ನೀರು ಸಮರ್ಪಕ ಪೂರೈಕೆಗೆ ಕ್ರಮಕೈಗೊಳ್ಳಬೇಕು. ಪೈಪ್​ಲೈನ್ ಅಳವಡಿಕೆ, ಕುಡಿಯುವ ನೀರಿನ ಮೂಲಗಳನ್ನು ಗುರುತಿಸಬೇಕು ಎಂದರು.

ಶಿವಮೊಗ್ಗ ನಗರದಲ್ಲಿ ಕೆಲ ಬಡಾವಣೆಗಳಲ್ಲಿ 24/7 ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದ್ದರೂ ಸಮರ್ಪಕ ನೀರು ಸಿಗುತ್ತಿಲ್ಲ ಎಂಬ ದೂರುಗಳಿವೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಸರಿಪಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಶಿವಮೊಗ್ಗ ನಗರದ ಭವಿಷ್ಯದ ದೃಷ್ಟಿಯಿಂದ ನೀರಿನ ಮರುಬಳಕೆ, ತ್ಯಾಜ್ಯ ನೀರು ಸಂಸ್ಕರಣೆ ಸೇರಿ ವಿವಿಧ ಕ್ರಮಗಳ ಕುರಿತು ಯೋಜನೆ ಸಿದ್ಧಪಡಿಸಿ ಸ್ಮಾರ್ಟ್​ಸಿಟಿ ಕಾರ್ಯಕ್ರಮದಡಿ ಅನುಷ್ಠಾನ ಮಾಡಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಎಲ್ಲ ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ನಡೆಸಬೇಕು. ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ವಿುಸಲು ನಿವೇಶನ ಗುರುತಿಸಬೇಕು. ಪ್ರಸ್ತುತ 1902 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿದೆ. 200 ಅಂಗನವಾಡಿಗಳು ನಿರ್ಮಾಣ ಹಂತದಲ್ಲಿವೆ. 252 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿವೆ. 102 ಅಂಗನವಾಡಿಗಳಿಗೆ ನಿವೇಶನ ಗುರುತಿಸಲಾಗಿದೆ. ಇನ್ನುಳಿದ ಅಂಗನವಾಡಿಗಳಿಗೆ ನಿವೇಶನ ಗುರುತಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.

ವೃದ್ಧಾಪ್ಯ ವೇತನ ಇತ್ಯಾದಿ ಸೌಲಭ್ಯಗಳಿಗೆ ಆನ್​ಲೈನ್ ಅರ್ಜಿ ಸಲ್ಲಿಸಲು ಅಂಗವಿಕಲ ಅಭ್ಯರ್ಥಿಗಳಿಗೆ ನೆರವು ನೀಡುವಂತೆ ತಿಳಿಸಿದರು. ಸಭೆ ನಂತರ ಪರಿಮಾಣು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಮಂಗನ ಕಾಯಿಲೆ ಕುರಿತು ಮಾಹಿತಿ ಪಡೆದರು. ಎಡಿಸಿ ಪೂರ್ಣಿಮಾ, ಜಿಪಂ ಸಿಇಒ ಡಾ. ಕೆ.ಶಿವರಾಮೇಗೌಡ ಇದ್ದರು.

21.70 ಕೋಟಿ ರೂ. ಸಾಲಮನ್ನಾ:ಜಿಲ್ಲೆಯಲ್ಲಿ ಸಾಲಮನ್ನಾ ಯೋಜನೆಯಡಿ 33,886 ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಡಿಸಿ ಕೆ.ಎ.ದಯಾನಂದ್ ಹೇಳಿದರು. ಈವರೆಗೆ 5,004 ಫಲಾನುಭವಿಗಳ 21.70 ಕೋಟಿ ರೂ. ಮೊತ್ತದ ಸಾಲ ಮನ್ನಾ ಮಾಡಲಾಗಿದೆ. ಹಂತ ಹಂತವಾಗಿ ಸಾಲ ಮನ್ನಾ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಸಂಪೂರ್ಣ ಸಾಲಮನ್ನಾಕ್ಕಾಗಿ 139.38 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked