ಮೋದಿ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಚಾರ ನಡೆಸಿ

ಮೋದಿ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಚಾರ ನಡೆಸಿ

ಮೋದಿ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಚಾರ ನಡೆಸಿ

ಶಿವಮೊಗ್ಗ: ಮೋದಿನೂ ಇಲ್ಲ…ಏನೂ ಇಲ್ಲ…. ಯಾರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳದೆ ಸರಿಯಾಗಿ ಚುನಾವಣೆ ನಡೆಸಿ. ಭದ್ರಾವತಿಯಲ್ಲಿ ಕನಿಷ್ಠ ಒಂದು ಲಕ್ಷ ಮತಗಳ ಲೀಡ್ ನೀಡಬೇಕು. ಸೋತ ಜಾಗದಲ್ಲೇ ಮಧು ಬಂಗಾರಪ್ಪ ಗೆಲ್ಲಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಹುರಿದುಂಬಿಸಿದ್ದಾರೆ.

ಶನಿವಾರ ಭದ್ರಾವತಿಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಲು ಶಿಲೆಯಾಗಲು ಉಳಿಯೇಟು ಬೇಕೇಬೇಕು. ಮಧುಬಂಗಾರಪ್ಪ ಈಗಾಗಲೇ ಸಾಕಷ್ಟು ಹೊಡೆತ ತಿಂದಿದ್ದಾರೆ. ಬಂಗಾರಪ್ಪ ಅವರ ಎಲ್ಲ ಗುಣಗಳು ಮಧು ಬಂಗಾರಪ್ಪ ಅವರಲ್ಲಿವೆ. ವಿಧಾನಸಭೆ ಚುನಾವಣೆಯಲ್ಲಿ ಮಧು ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಆದರೆ ಈ ಬಾರಿ ಅವರನ್ನು ಸಂಸತ್ತಿಗೆ ಆರಿಸಿ ಕಳುಹಿಸಬೇಕು ಎಂದರು.

ಕೇವಲ ಭದ್ರಾವತಿ ಕ್ಷೇತ್ರದಲ್ಲಿ ಸಿಗುವ ಲೀಡ್​ನಿಂದಲೇ ಮಧುಬಂಗಾರಪ್ಪ ಗೆಲ್ಲುವಂತಾಗಬೇಕು. ಬುಲೆಟ್​ಗಿಂತ ಬ್ಯಾಲೆಟ್ ಸ್ಟ್ರಾಂಗ್ ಎನ್ನುವುದನ್ನು ಏಪ್ರಿಲ್ 23ರಂದು ಮತದಾರರು ತೋರಿಸಬೇಕು. ಕಾಂಗ್ರೆಸ್​ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇದಕ್ಕಾಗಿಯೇ ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿಸಲು ದೇವೇಗೌಡರು ಒಪ್ಪಿದ್ದಾರೆ ಎಂದು ಹೇಳಿದರು.

ಮಧುಗೆ ಮೋಸ ಮಾಡಬೇಡಿ:ಭದ್ರಾವತಿಯಲ್ಲಿ ಎಲ್ಲರೂ ಒಟ್ಟಾಗಿ ಮಧು ಬಂಗಾರಪ್ಪ ಅವರ ಪರವಾಗಿ ಕೆಲಸ ಮಾಡಿ. ಅವರಿಗೆ ಯಾರಾದರೂ ಮೋಸ ಮಾಡಿದರೆ ಹೆತ್ತ ತಾಯಿಗೆ ಮೋಸ ಮಾಡಿದಂತೆ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಕಳೆದ ಚುನಾವಣೆಯಲ್ಲಿ ಮಧುಬಂಗಾರಪ್ಪ ಅತಿ ಕಡಿಮೆ ಮತಗಳ ಅಂತರದಿಂದ ಸೋತರು. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಈ ಬಾರಿ ಮಧು ಬಂಗಾರಪ್ಪ ಗೆಲ್ಲುವುದು ಅಷ್ಟೇ ಸತ್ಯ. ಏಪ್ರಿಲ್ ಮೂರರಂದು ಮಧುಬಂಗಾರಪ್ಪ ನಾಮಪತ್ರ ಸಲ್ಲಿಸುತ್ತಿದ್ದು, ಅಂದು ಭದ್ರಾವತಿಯಿಂದ ಕನಿಷ್ಠ ಮೂರು ಸಾವಿರ ಜನ ನಾಮಪತ್ರ ಸಲ್ಲಿಕೆ ವೇಳೆ ಹಾಜರಿರಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.

ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಶಾಸಕರು, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೇವಲ ಸುಳ್ಳು ಭರವಸೆ ನೀಡುತ್ತಿದೆ. ವಿದೇಶದಲ್ಲಿರುವ ಕಪ್ಪು ಹಣ ತಂದು ದೇಶದಲ್ಲಿರುವ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುವುದಾಗಿ ಹೇಳಿದ್ದರು. ಆದರೆ 15 ಪೈಸೆಯನ್ನೂ ಹಾಕಿಲ್ಲ. ಭ್ರಷ್ಟ ಕೋಮುವಾದಿ ಬಿಜೆಪಿಯನ್ನು ಮನೆಗೆ ಕಳುಹಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಜಿಪಂ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಬಲ್ಕಿಷ್​ಬಾನು, ಕಾಂಗ್ರೆಸ್ ಮುಖಂಡ ಸಿ.ಎಂ.ಸಾದಿಕ್ ಇತರರಿದ್ದರು.

ಸರ್ಕಾರ ಉಳಿಯಲು ನಾನು ಗೆಲ್ಲಬೇಕು:
ನನ್ನನ್ನು ಗೆಲ್ಲಿಸುವುದು ಡಿ.ಕೆ.ಶಿವಕುಮಾರ್ ಅವರ ಜವಾಬ್ದಾರಿಯಲ್ಲ. ಅದು ಅವರ ಕರ್ತವ್ಯ. ಬಂಗಾರಪ್ಪ ಋಣ ನಾನು ತೀರಿಸಬೇಕು. ಹೀಗಾಗಿ ನೀನು ಚುನಾವಣೆಗೆ ಸ್ಪರ್ಧಿಸು ಎಂದು ಮೊದಲು ಹೇಳಿದ್ದೇ ಶಿವಕುಮಾರ್. ಸಮ್ಮಿಶ್ರ ಸರ್ಕಾರ ಐದು ವರ್ಷ ಸದೃಢವಾಗಿರಬೇಕಾದರೆ ನಾನು ಗೆಲ್ಲಲೇಬೇಕು ಎಂದು ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಉಪ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಇನ್ನೆರಡು ದಿನ ಕ್ಷೇತ್ರದಲ್ಲಿ ಇದ್ದಿದ್ದರೆ ನಾನು ಸಂಸದನಾಗಿರುತ್ತಿದ್ದೆ. ಆದರೆ ಕಾಂಗ್ರೆಸ್​ನವರು ಅವರನ್ನು ಬಳ್ಳಾರಿಗೆ ಕಳುಹಿಸಿದರು. ಇದರಿಂದಾಗಿ ನಾನು ಸೋಲಬೇಕಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ನನ್ನೆರಡು ಕಣ್ಣುಗಳಿದ್ದಂತೆ ಎಂದರು.

ಡಿ.ಕೆ.ಶಿವಕುಮಾರ್ ಪ್ರಚಾರಕ್ಕೆ ಬರುತ್ತಾರಾ ಎಂದು ಕೆಲವರು ವ್ಯಂಗ್ಯವಾಗಿ ಕೇಳಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ಶಿವಮೊಗ್ಗದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟೀಕೆ ಮಾಡಿದವರಿಗೆ ಅವರೇ ಉತ್ತರ ನೀಡುತ್ತಾರೆ.

ಉಪಚುನಾವಣೆಯಲ್ಲಿ ಕೆಲಸ ಮಾಡಲು ಹದಿಮೂರು ದಿನ ಸಿಕ್ಕಿತ್ತು. ಅಷ್ಟು ಕಡಿಮೆ ಅವಧಿಯಲ್ಲಿ ಬಿಜೆಪಿಯ ಲೀಡ್​ಅನ್ನು ಮೂರೂವರೆ ಲಕ್ಷದಿಂದ ಐವತ್ತು ಸಾವಿರಕ್ಕೆ ಇಳಿಸಿದ್ದೆ. ನನಗೆ ಒಂದು ವರ್ಷ ಅಧಿಕಾರ ದೊರೆತರೆ ಹಿಂದಿನವರು ಮಾಡಿರುವ ಕೆಲಸಕ್ಕಿಂತ ಹತ್ತು ಪಟ್ಟು ಕೆಲಸ ಮಾಡಿ ತೋರಿಸುತ್ತೇನೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಬ್ಬರೂ ಬಂಗಾರಪ್ಪ ಬಗ್ಗೆ ಬಗ್ಗೆ ಗೌರವ ಹೊಂದಿದ್ದಾರೆ. ಅವರ ಗೌರವ ಉಳಿಸಿ ಎಂದು ಮನವಿ ಮಾಡಿದರು.

ಬಿಎಸ್​ವೈ-ಬಿವೈಆರ್ ಮೇಲೆ ಬೇಜಾರಿಲ್ಲ:

ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮೇಲೆ ಬೇಜಾರಿಲ್ಲ. ನನಗೆ ಬೇಸರ ಇರುವುದು ಬಿಜೆಪಿ ಕೇಂದ್ರ ನಾಯಕರ ಮೇಲೆ. ಬಿಜೆಪಿ ನಾಯಕರಿಗೆ ಯಡಿಯೂರಪ್ಪ ಬಗ್ಗೆ ಪ್ರೀತಿ ಇದ್ದಿದ್ದರೆ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡಬಹುದಿತ್ತು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ ಅವರ ರಾಜ್ಯಾಧ್ಯಕ್ಷ ಸ್ಥಾನವನ್ನು ಕಿತ್ತುಕೊಂಡು ಕೇಂದ್ರ ನಾಯಕರು ಅವರನ್ನು ಮೂಲೆಯಲ್ಲಿ ಕೂರಿಸುತ್ತಾರೆ. ತೇಜಸ್ವಿನಿ ಅನಂತ ಕುಮಾರ್ ಏನು ತಪ್ಪು ಮಾಡಿದ್ದರು? ಆದರೂ ಅವರಿಗೆ ಬಿಜೆಪಿ ಟಿಕೆಟ್ ನೀಡಲಿಲ್ಲ. ಕೊಡಲಿಲ್ಲ. ಆರು ಬಾರಿ ಎಂಪಿಯಾಗಿ, ಕೇಂದ್ರ ಸಚಿವರೂ ಆಗಿದ್ದ ಅನಂತಕುಮಾರ್ ಪತ್ನಿಗೆ ಈ ಸ್ಥಿತಿಯಾದರೆ ಇನ್ನು ಯಡಿಯೂರಪ್ಪ ಯಾವ ಲೆಕ್ಕ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

Leave a Reply

Your email address will not be published. Required fields are marked