Radius: Off
Radius:
km Set radius for geolocation
Search

ಮಾರ್ಚ್ 2ರಂದು ಶರಾವತಿ ಜಲವಿದ್ಯುದಾಗಾರ ಲೋಕಾರ್ಪಣೆ

ಕಾರ್ಗಲ್  ಸಮೀಪದ ಎಬಿ ಸೈಟ್‌ನಲ್ಲಿರುವ ನವೀಕರಣಗೊಂಡ ಶರಾವತಿ ಜಲವಿದ್ಯುದಾಗಾರವನ್ನು ಮಾರ್ಚ್ 2ರಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

2016ರ ಡಿ.18ರಂದು ಆಕಸ್ಮಿಕವಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಶರಾವತಿ ಜಲವಿದ್ಯುದಾಗಾರದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದ 10 ಘಟಕಗಳು ಸಂಪೂರ್ಣವಾಗಿ ಸ್ತಬ್ಧಗೊಂಡವು. ಸರ್ಕಾರ ಇದನ್ನು ಸವಾಲಾಗಿ ಸ್ವೀಕರಿಸಿ, ನಿಗಮಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ನೀಡಿತು.

ಕೇವಲ 34 ದಿವಸಗಳಲ್ಲಿ ಒಂದು ವಿದ್ಯುತ್ ಘಟಕ ಉತ್ಪಾದನೆಯಲ್ಲಿ ತೊಡಗುವಂತೆ ದುರಸ್ತಿ ಕಾರ್ಯ ನಡೆಯಿತು. ನಂತರ 174 ದಿನಗಳಲ್ಲಿ ಒಟ್ಟು 10 ಘಟಕಗಳನ್ನು ಕೆಪಿಸಿ ವತಿಯಿಂದ ನವೀಕರಣಗೊಳಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸಮರ್ಪಕವಾಗಿ ತೊಡಗಿಕೊಂಡು ವಿದ್ಯುತ್ ವಿತರಣಾ ಜಾಲಕ್ಕೆ ಶರಾವತಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಲಾಗಿತ್ತು.

50 ವರ್ಷಗಳಷ್ಟು ಹಳೆಯದಾಗಿದ್ದ, ಬಹುಕೋಟಿ ವೆಚ್ಚದ ವಿದ್ಯುದಾಗಾರವನ್ನು ಈಗ ಸಂಪೂರ್ಣವಾಗಿ ನವೀಕರಣಗೊಳಿಸಲಾಗಿದೆ. ಇದಕ್ಕೆ ಅಗತ್ಯವಾದ ಅನುದಾನಗಳನ್ನು ಸರ್ಕಾರದಿಂದ ನಿಗಮಕ್ಕೆ ನೀಡಲಾಗಿದೆ. ವಿದ್ಯುದಾಗಾರದ ಲೋಕಾರ್ಪಣೆ ನಿಮಿತ್ತ ಮಾ.2ರಂದು ಶರಾವತಿ ಕಣಿವೆ ವ್ಯಾಪ್ತಿಯಲ್ಲಿ ನಿಗಮದ ವತಿಯಿಂದ ಸಾರ್ವಜನಿಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಶರಾವತಿ ಜಲವಿದ್ಯುದಾಗಾರ 50 ವರ್ಷ ಪೂರೈಸಲಿದೆ. ಈ ಮಹತ್ವದ ಯೋಜನೆಗೆ ಚಾಲನೆ ನೀಡಿದ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಶರಾವತಿ ಕಣಿವೆಯ ಯೋಜನೆಯ ರೂವಾರಿ ಸರ್.ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಗಳನ್ನು ಎ.ಬಿ. ಸೈಟಿನಲ್ಲಿರುವ ಜಲವಿದ್ಯುದಾಗಾರದ ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಪುತ್ಥಳಿಗಳನ್ನು ಸಚಿವ ಕಾಗೋಡು ತಿಮ್ಮಪ್ಪ ಮತ್ತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅನಾವರಣಗೊಳಿಸಲಿದ್ದಾರೆ ಎಂದು ಕೆಪಿಸಿ ಕಾಮಗಾರಿ ವಿಭಾಗದ ಸಿ.ಎಂ. ದಿವಾಕರ್ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದ ವಿದ್ಯುತ್ ನಿಯಂತ್ರಣ ಕೊಠಡಿ, ಅತ್ಯಾಧುನಿಕ ಶೈಲಿಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಮತ್ತು ವಿತರಣಾ ಜಾಲ, ಅತಿ ಹೆಚ್ಚು ನೂತನ ಸುರಕ್ಷತಾ ಮಾರ್ಗಗಳ ಅಳವಡಿಕೆ ನವೀಕೃತಗೊಂಡ ಶರಾವತಿ ಜಲವಿದ್ಯುದಾಗಾರದ ವೈಶಿಷ್ಟ್ಯವಾಗಿದೆ ಎಂದು ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಎಂಜಿನಿಯರ್ ಆರ್.ವೈ. ಶಿರಾಲಿ ಮಾಹಿತಿ ನೀಡಿದರು.

Leave a Reply

Your email address will not be published. Required fields are marked