Radius: Off
Radius:
km Set radius for geolocation
Search

ಪ್ರಸನ್ನಕುಮಾರ್‌ಗೆ ಅದೃಷ್ಟ ಪರೀಕ್ಷೆ, ಈಶ್ವರಪ್ಪಗೆ ಅಗ್ನಿಪರೀಕ್ಷೆ

ಶಿವಮೊಗ್ಗ : ಬಿಜೆಪಿ ಸರಕಾರದ ಅವಧಿಯಲ್ಲಿ ಅಭಿವೃದ್ಧಿ, ಅನುದಾನದ ಹೊಳೆ ಹರಿಸಿದರೂ ಸೋಲು ತಪ್ಪಿಸಿಕೊಳ್ಳಲಾಗದ ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪರಿಗೆ ಈ ಬಾರಿ ‘ಅಗ್ನಿಪರೀಕ್ಷೆ’. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಇಲ್ಲದೆಯೂ ‘ಗೆಲ್ಲಬಲ್ಲೆ ‘ಎಂದು ಸವಾಲು ಹಾಕಿ ಸೋತುಸುಣ್ಣವಾದ ಅವರಿಗೆ ಈಗ ಬಿಎಸ್‌ವೈ ಜತೆಗಿದ್ದರೂ ಕ್ಷೇತ್ರ ಬಿಟ್ಟು ಕದಲಲಾಗದ ಪರಿಸ್ಥಿತಿ ತಂದೊಡ್ಡಿದೆ.

ಕ್ಷೇತ್ರದಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನಕುಮಾರ್‌ಗೆ ಕೆ.ಎಸ್‌.ಈಶ್ವರಪ್ಪರೇ ಎದುರಾಳಿ. ಇವರೊಂದಿಗೆ ಜೆಡಿಎಸ್‌ನ ನಿವೃತ್ತ ಎಂಜಿನಿಯರ್‌ ಎಚ್‌.ಎನ್‌.ನಿರಂಜನ್‌, ಜೆಡಿಎಸ್‌ ಟಿಕೆಟ್‌ ವಂಚಿತ ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ(ಬಾಬಣ್ಣ) ಸೇರಿದಂತೆ ದಾಖಲೆಯ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿಶೇಷವೆಂದರೆ ಇದೇ ಮೊದಲ ಬಾರಿ ಏಳು ಮುಸ್ಲೀಮ್‌ ಅಭ್ಯರ್ಥಿಗಳು ಕಣದಲ್ಲಿರುವುದು. ಜಾತಿವಾರು ನೋಡಿದಾಗ ಲಿಂಗಾಯಿತರು ಮೊದಲ ಸ್ಥಾನದಲ್ಲಿದ್ದರೆ, ಆನಂತರದಲ್ಲಿ ಬ್ರಾಹ್ಮಣರು, ಮುಸ್ಲೀಮರು, ಪರಿಶಿಷ್ಟರು, ಒಕ್ಕಲಿಗರು, ಕುರುಬ ಇದ್ದಾರೆ.

ಹಿಂದೆಲ್ಲ ಸದಾ ಗೆಲುವಿನ ಲೆಕ್ಕಾಚಾರದಲ್ಲಿರುತ್ತಿದ್ದ ಈಶ್ವರಪ್ಪರಿಗೆ ಈ ಬಾರಿ ಗೆಲುವು ಸುಲಭವಲ್ಲ. ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿದ್ದಾರೆ. 2ನೇ ಸ್ಥಾನ ಗಳಿಸಿದ್ದ ಕೆಜೆಪಿ ಅಭ್ಯರ್ಥಿ ಎಸ್‌.ರುದ್ರೇಗೌಡ ಈಗ ಈಶ್ವರಪ್ಪ ಬೆನ್ನಿಗೆ ನಿಂತಿದ್ದಾರೆ. ಜಿಲ್ಲೆಯಲ್ಲಿ ಯಾರು ಸೋಲುತ್ತಾರೋ ಗೊತ್ತಿಲ್ಲ, ಆದರೆ, ಈಶ್ವರಪ್ಪ ಗೆಲ್ಲಲೇಬೇಕು ಎಂದು ಯಡಿಯೂರಪ್ಪರಿಗೆ ಚಾಣಕ್ಯ ಅಮಿತ್‌ ಶಾ ಖಡಕ್ಕಾಗಿ ಹೇಳಿರುವುದರಿಂದ ಯಡಿಯೂರಪ್ಪ ಸಹ ಗೆಲುವಿಗೆ ಶ್ರಮಹಾಕಿದ್ದಾರೆ ಎನ್ನಲಾಗಿದೆ. ಇಷ್ಟಾಗಿಯೂ ಈಶ್ವರಪ್ಪರಿಗೆ ‘ಭಯ’ ಮಾತ್ರ ಹೋಗಿಲ್ಲ.

ವಿಶೇಷವೆಂದರೆ ಇಲ್ಲಿ ಯಾರೇ ಸ್ಪರ್ಧಿಸಿದರೂ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಕನಿಷ್ಠ 25ಸಾವಿರ ಮತಗಳು ಬಂದೇ ಬರುತ್ತವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ನಡುವೆ ಹಂಚಿಹೋದ ಮತಗಳ ದೃವೀಕರಣದಿಂದ ತಮಗೆ 70ಸಾವಿರಕ್ಕೂ ಹೆಚ್ಚು ಮತಗಳು ಬರಲಿವೆ ಎಂಬುದು ಈಶ್ವರಪ್ಪ ರ ಲೆಕ್ಕಾಚಾರ. ಆದರೆ, ಆಗಿನ ಸಂದರ್ಭವೇ ಬೇರೆ ಇತ್ತು. ಹಿಂದಿನ ಚುನಾವಣೆಯಲ್ಲಿ ಮುಸ್ಲೀಮರು ಅಧಿಕ ಸಂಖ್ಯೆಯಲ್ಲಿ ಕೆಜೆಪಿಯನ್ನು ಬೆಂಬಲಿಸಿದ್ದರು. ಈ ಬಾರಿ ಮುಸ್ಲೀಮ್‌ ಮತಗಳು ಕಾಂಗ್ರೆಸ್‌ಗೆ ಹೋಗುವ ಸಾಧ್ಯತೆಯೇ ಹೆಚ್ಚು.

ಕಾಂಗ್ರೆಸ್‌ನ ಕೆ.ಬಿ.ಪ್ರಸನ್ನಕುಮಾರ್‌ ಅವರಿಗೆ ರಾಜ್ಯ ಸರಕಾರದ ಯೋಜನೆಗಳು, ವಿವಿಧ ಯೋಜನೆಗಳಡಿ ನಗರಕ್ಕೆ ತಂದ 2ಸಾವಿರ ಕೋಟಿ ರೂ. ಅನುದಾನ ಅವರ ಬೆನ್ನಿಗಿವೆ. ಬ್ರಾಹ್ಮಣ ಸಮಾಜದ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಸನ್ನಕುಮಾರ್‌ಗೆ ಒಲಿಯಬಹುದು. ವೀರಶೈವರು ಯಡಿಯೂರಪ್ಪರನ್ನು ಬೆಂಬಲಿಸಿದರೂ ಕಾಂಗ್ರೆಸ್‌ನ ಲಿಂಗಾಯಿತ ಫ್ಯಾಕ್ಟರ್‌ನಿಂದಾಗಿ ಸ್ವಲ್ಪ ಮಟ್ಟಿನ ಮತಗಳು ‘ಕೈ’ಗೂ ಬೀಳಲಿದೆ. ಕುರುಬ ಸಮಾಜ ಈಶ್ವರಪ್ಪರಿಗಿಂತ ಕಾಂಗ್ರೆಸ್ಸನ್ನೇ ಹೆಚ್ಚು ಬೆಂಬಲಿಸುವ ಸಾಧ್ಯತೆ ಇದೆ. ಮುಸ್ಲೀಮರ ಜತೆಗೆ ಕ್ರೈಸ್ತರ ಮತಗಳು ಕಾಂಗ್ರೆಸ್‌ ಕಡೆಗೆ ವಾಲಲಿದೆ. ವಿವಿಧ ಬಡಾವಣೆಗಳು ಮತ್ತು ಕೊಳಚೆ ಪ್ರದೇಶಗಳ ರಸ್ತೆ, ಚರಂಡಿ ಮತ್ತು ಇತರೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ನೀಡಿದ ಆದ್ಯತೆ ಮತ್ತಷ್ಟು ಮತಗಳನ್ನು ತಂದುಕೊಟ್ಟರೆ 2ನೇ ಗೆಲುವು ಸಾಧ್ಯವಾಗಬಹುದು.

ವಿಧಾನ ಪರಿಷತ್‌ನ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಹೊಸಮುಖವಾದ ಜೆಡಿಎಸ್‌ನ ಎಚ್‌.ಎನ್‌.ನಿರಂಜನ್‌ ಕಾಂಗ್ರೆಸ್‌ ಅಭ್ಯರ್ಥಿಗೆ ಭಾರಿ ಪೈಪೋಟಿ ನೀಡಿದ್ದರು. ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಸ್ವಲ್ಪದರಲ್ಲೇ ಜಯ ತಪ್ಪಿಸಿಕೊಂಡಿದ್ದ ಅವರನ್ನು ಜನ ಬೆಂಬಲಿಸುತ್ತಾರೆಂಬ ಕಾರಣಕ್ಕೆ ನಗರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಜೆಡಿಎಸ್‌ನ ಸಾಂಪ್ರದಾಯಿಕ ಮತಗಳು, ಒಕ್ಕಲಿಗ, ಮುಸ್ಲೀಮ್‌, ಕ್ರೈಸ್ತರು, ಕುರುಬರ ಮತಗಳನ್ನು ಜೆಡಿಎಸ್‌ ನಂಬಿಕೊಂಡಿದೆ. ಜೆಡಿಎಸ್‌ ಟಿಕೆಟ್‌ ವಂಚಿತ ಮಹಾನಗರ ಪಾಲಿಕೆ ಸದಸ್ಯ ನರಸಿಂಹಮೂರ್ತಿ ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿದ್ದು ಅವರು ಒಂದಿಷ್ಟು ಮತಗಳನ್ನು ಕಸಿಯಬಹುದು.

————
ಕ್ಷೇತ್ರದಲ್ಲಿ ಕಳೆದ 14 ಚುನಾವಣೆಗಳಲ್ಲಿ ಕಾಂಗ್ರೆಸ್‌ 9 ಬಾರಿ ಜಯಗಳಿಸಿದರೆ, ಬಿಜೆಪಿ ಅಭ್ಯರ್ಥಿಗಳು ಐದು ಬಾರಿ ಜಯಗಳಿಸಿದ್ದಾರೆ. 1957ರ ಚುನಾವಣೆಯಿಂದ ಇಲ್ಲಿವರೆಗೆ 8ಬಾರಿ ಬ್ರಾಹ್ಮಣ ಸಮಾಜದ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. 1989ರ ಚುನಾವಣೆಯಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗ ಕುರುಬ ಸಮಾಜದ ಕೆ.ಎಸ್‌.ಈಶ್ವರಪ್ಪ ಜಯಗಳಿಸಿದರು. ಹಿಂದುತ್ವದ ಅಜೆಂಡಾದ ಮೇಲೆ ನಿರಂತರವಾಗಿ ಗೆಲುವು ಸಾಧಿಸುತ್ತಿದ್ದ ಈಶ್ವರಪ್ಪರಿಗೆ ಕಾಂಗ್ರೆಸ್‌ನ ಎಚ್‌.ಎಂ.ಚಂದ್ರಶೇಖರಪ್ಪ ಬ್ರೇಕ್‌ ಹಾಕಿದ್ದರು. 2013ರ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಮತ ವಿಭಜನೆ ಕ್ಷೇತ್ರವನ್ನು ಮತ್ತೊಮ್ಮೆ ಕಾಂಗ್ರೆಸ್‌ ಪಾಲಾಗುವಂತೆ ಮಾಡಿತು.

————–

ಕಳೆದ ಚುನಾಣೆಯಲ್ಲಿ ಕೆಜೆಪಿ ಕಾರಣಕ್ಕೆ ತಮ್ಮ ಬತ್ತಳಿಕೆಯಿಂದ ಹೊರಗಿಟ್ಟಿದ್ದ ಹಿಂದುತ್ವದ ಅಜೆಂಡಾವನ್ನು ಈಶ್ವರಪ್ಪ ಅವರು ಈ ಬಾರಿ ಮತ್ತೆ ಮತ್ತೆ ಪ್ರಯೋಗಿಸುತ್ತಲೇ ಇದ್ದಾರೆ. ಆದರೆ, ಅದೀಗ ಸವಕಲು ನಾಣ್ಯ. 50ಕ್ಕೂ ಅಧಿಕ ಬಸ್‌ಗಳಲ್ಲಿ ಪ್ರವಾಸ ಮಾಡಿ ಬಂದ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರು ಈಶ್ವರಪ್ಪರಿಗೆ ಅದೆಷ್ಟು ‘ತೀರ್ಥ’ ನೀಡುತ್ತಾರೋ ಗೊತ್ತಿಲ್ಲ. ಮಾರಿಕಾಂಬ ದೇವಿ ಜಾತ್ರೆಯಲ್ಲಿ ತುಂಬಿದ ಮಡಿಲು ಈಶ್ವರಪ್ಪರ ಮತಪೆಟ್ಟಿಗೆಯನ್ನೂ ತುಂಬಿದರೆ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಬಹುದು.

Leave a Reply

Your email address will not be published. Required fields are marked