ನೀರಾವರಿ ಯೋಜನೆಯ ಶ್ರೇಯ ಸಮ್ಮಿಶ್ರ ಸರ್ಕಾರದ್ದು: ಡಿ.ಕೆ.ಶಿ.

ನೀರಾವರಿ ಯೋಜನೆಯ ಶ್ರೇಯ ಸಮ್ಮಿಶ್ರ ಸರ್ಕಾರದ್ದು: ಡಿ.ಕೆ.ಶಿ.

ನೀರಾವರಿ ಯೋಜನೆಯ ಶ್ರೇಯ ಸಮ್ಮಿಶ್ರ ಸರ್ಕಾರದ್ದು: ಡಿ.ಕೆ.ಶಿ.

ಶಿವಮೊಗ್ಗ: ಜಿಲ್ಲೆಯಲ್ಲಿ ನೀರಾವರಿ ಯೋಜನೆಯ ಸಂಪೂರ್ಣ ಕ್ರೆಡಿಟ್ ಸಮ್ಮಿಶ್ರ ಸರ್ಕಾರಕ್ಕೆ ಸಲ್ಲಬೇಕು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಮಧು ಬಂಗಾರಪ್ಪ ಪಾದಯಾತ್ರೆ ಸಂದರ್ಭದಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಕಾಂಗ್ರೆಸ್, ಜೆಡಿಎಸ್ ಮುಖಂಡರು ಮನವಿ ಸಲ್ಲಿಸಿದ್ದರು. ನುಡಿದಂತೆ ನಡೆಯಲು ಸಿಎಂ ಕುಮಾರಸ್ವಾಮಿ ಬಜೆಟ್​ನಲ್ಲಿ ನೀರಾವರಿ ಯೋಜನೆ ಮಂಜೂರು ಮಾಡಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ನೀರಾವರಿ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಜಾತಿ, ವರ್ಗ, ಸಮುದಾಯವೆಂದು ಯೋಚಿಸಿ ಯೋಜನೆ ತರಲು ಸಾಧ್ಯವಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡುವುದು ಮುಖ್ಯ ಎಂದರು.

ಫೋಟೋ ಪೋಸ್ ಅಷ್ಟೇ:ಬಿಜೆಪಿ ಸಂಸದರು ಕೇಂದ್ರ ಸಚಿವೆ ಉಮಾಭಾರತಿ ಜತೆ ಫೋಟೋ ಫೋಸ್ ನೀಡಿದ್ದು ಬಿಟ್ಟರೆ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುದಾನ ತಂದಿರುವ ಯಾವುದೇ ಮಾಹಿತಿ ಇಲ್ಲ. ಬಿಜೆಪಿ ನಿಯೋಗ ನನಗೂ ಮನವಿ ಮಾಡಿತ್ತು. ಆದರೆ ಯೋಜನೆ ಅನುಷ್ಠಾನದ ನಿರ್ಧಾರ ಸಮ್ಮಿಶ್ರ ಸರ್ಕಾರದ್ದು ಎಂದು ತಿಳಿಸಿದರು.

ಮಲೆನಾಡಿನಲ್ಲಿ ಅರಣ್ಯವಾಸಿಗಳ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧ. ಹಕ್ಕುಪತ್ರ ವಿತರಣೆಗೆ ಸಂಬಂಧಿಸಿ ಅಧಿಕಾರಿಗಳೊಂದಿಗೆ ನಿರಂತರ ಚರ್ಚೆ ಮಾಡಲಾಗುತ್ತಿದೆ. ಒಕ್ಕಲೆಬ್ಬಿಸದೆ ಕಾನೂನಿನ ಚೌಕಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ದೇಶದ ಭವಿಷ್ಯಕ್ಕಾಗಿ ಬಿಜೆಪಿ ಆಡಳಿತವನ್ನು ಕೊನೆಗಾಣಿಸಬೇಕು. 5 ವರ್ಷಗಳಲ್ಲಿ ಬಿಜೆಪಿ ನುಡಿದಂತೆ ನಡೆಯಲಿಲ್ಲ. ಕಪ್ಪು ಹಣ ವಾಪಸ್ ತರಲಿಲ್ಲ. ಪ್ರತಿ ವರ್ಷ ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ. ಭ್ರಷ್ಟಾಚಾರ ನಿಯಂತ್ರಣ ಮಾಡಲಿಲ್ಲ. ವಿಶ್ವದಲ್ಲೇ ಹೆಚ್ಚಿನ ಮಾನವ ಸಂಪನ್ಮೂಲ ಹೊಂದಿರುವ ಭಾರತದಲ್ಲಿ ಯುವಜನತೆಗೆ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ. ರೈತರನ್ನು ನಿರ್ಲಕ್ಷ್ಯ ಮಾಡಿದೆ ಎಂದು ದೂರಿದರು.

ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡ, ಮಂಜುನಾಥ್ ಭಂಡಾರಿ, ಎಂ.ಶ್ರೀಕಾಂತ್, ಕೆ.ಬಿ.ಪ್ರಸನ್ನಕುಮಾರ್ ಮತ್ತಿತರರಿದ್ದರು.

ಅಫಿಡವಿಟ್ ಸಲ್ಲಿಸಿದ್ದು ತಪ್ಪು:ಅಡಕೆ ಹಾನಿಕಾರಕ ಎಂದು ಯುಪಿಎ ಅವಧಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದು ತಪ್ಪು. ಆದರೆ ಬಿಜೆಪಿ ಆಡಳಿತಾವಧಿಯಲ್ಲಿ ಸರಿಪಡಿಸುವ ಅವಕಾಶವಿದ್ದರೂ ಏಕೆ ಮುಂದಾಗಲಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಅಡಕೆ ಹಾನಿಕಾರಕ ಎಂದು ಸಂಸತ್​ನಲ್ಲಿ ಸಚಿವರು ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ವಾಪಸ್ ಪಡೆದು ಅಗತ್ಯ ನಿರ್ಣಯ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅಡಕೆ ಬೆಳೆಗಾರರ ರಕ್ಷಣೆಗೆ ಬದ್ಧವಾಗಿ ತೀರ್ಮಾನ ಕೈಗೊಳ್ಳಲಿದೆ. ರೈತರ ಬದುಕಿನ ಉಳಿವಿಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಕಸ್ತೂರಿ ರಂಗನ್ ವರದಿ ಅಪಾಯಕಾರಿ ಆಗಿರುವುದರಿಂದ ಕೇಂದ್ರ ಸರ್ಕಾರ ತಿರಸ್ಕರಿಸಬೇಕು. ರಾಜ್ಯ ಸರ್ಕಾರದ ಮಟ್ಟದಲ್ಲಿ ರ್ಚಚಿಸಿ ತಿರಸ್ಕರಿಸುವಂತೆ ಕೇಂದ್ರಕ್ಕೆ ಒತ್ತಡ ಹಾಕಿದ್ದೇವೆ. ಟೂರಿಸಂ, ರೈತರು ಸೇರಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರಕವಾಗುತ್ತದೆ. ಮರು ಪರಿಶೀಲನೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಆಯನೂರು ಮಂಜುನಾಥ್ ಲೆಕ್ಕಕ್ಕಿಲ್ಲ:ಬಿಜೆಪಿ ಎಂಎಲ್​ಸಿ ಆಯನೂರು ಮಂಜುನಾಥ್ ಅವರು ರಾಜಕೀಯವಾಗಿ ನಮಗೆಲ್ಲ ಲೆಕ್ಕಕ್ಕೆ ಇಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ವ್ಯಂಗವಾಡಿದರು. ನೂರು ಡಿಕೆಶಿ ಬಂದರೂ ಬಿಜೆಪಿ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದು ಆಯನೂರು ಇತ್ತೀಚೆಗೆ ಹೇಳಿಕೆ ನೀಡಿದ್ದರು. ‘ನೂರು ಡಿಕೆಶಿ ಬಂದರೂ ಸಾಧ್ಯವಿಲ್ಲ’ ಎಂಬ ಹೇಳಿಕೆಯನ್ನು ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಅಥವಾ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಆಯನೂರು ಮಂಜುನಾಥ್ ಹೇಳಿಕೆಗೆ ನಮ್ಮ ಪಕ್ಷದ ಹುಡುಗರು ತಿರುಗೇಟು ನೀಡಲು ಸಾಕು, ನನ್ನ ಅಗತ್ಯವಿಲ್ಲ ಎಂದು ತಿಳಿಸಿದರು.

Leave a Reply

Your email address will not be published. Required fields are marked