Radius: Off
Radius:
km Set radius for geolocation
Search

ಜಿಲ್ಲೆಯಲ್ಲಿ ರೈತರಿಗೆ ಸಿಹಿ ನೀಡದ ಮಾವು

ಶಿವಮೊಗ್ಗ: ಮಳೆ ಅಭಾವ, ಅಕಾಲಿಕ ಮಳೆ, ಭಾರಿ ಗಾಳಿಯಿಂದಾಗಿ ಮಾವು ಬೆಳೆಗೆ ಪೆಟ್ಟು ಬಿದ್ದಿರುವುದರಿಂದ ಒಟ್ಟಾರೆ ಇಳುವರಿ ಮೇಲೆ ಪರಿಣಾಮ ಬೀರಿದ್ದು, ರೈತರ ಪಾಲಿಗೆ ಈ ಬಾರಿ ಮಾವು ಬೆಳೆ ಸಿಹಿ ತಂದಿಲ್ಲ.

2ವರ್ಷಗಳ ಹಿಂದೆ ಉತ್ತಮ ಫಸಲು ಪಡೆದು ಆರ್ಥಿಕ ಬಲದತ್ತ ಮುಖ ಮಾಡಿದ್ದ ರೈತರ ಸಮೂಹವೀಗ ಮಾವಿನ ಇಳುವರಿ ವೈಫಲ್ಯದಿಂದಾಗಿ ಕಂಗಾಲಾಗಿದ್ದಾರೆ.

ಪ್ರಸ್ತುತ ಜಿಲ್ಲೆಯ 3,359 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಹಣ್ಣನ್ನು ಬೆಳೆಯಲಾಗುತ್ತಿದೆ. ವಾರ್ಷಿಕ ಸರಾಸರಿ 40 ಸಾವಿರದಿಂದ 44ಸಾವಿರ ಕ್ವಿಂಟಲ್‌ ಇಳುವರಿ ಇದೆ. ಆದರೆ ಈ ಬಾರಿ ಒಟ್ಟಾರೆ ಉತ್ಪನ್ನ 39 ಸಾವಿರ ಕ್ವಿಂಟಾಲ್‌ಗೆ ಇಳಿದು, ಸುಮಾರು 4 ಸಾವಿರ ಕ್ವಿಂಟಾಲ್‌ಗೆ ಕುಸಿದಿದೆ.

ಜಿಲ್ಲೆ ವ್ಯಾಪ್ತಿಯಲ್ಲಿ ಸೊರಬ 1326, ಶಿಕಾರಿಪುರ 1122, ಭದ್ರಾವತಿ 164, ಸಾಗರ 44, ಹೊಸನಗರ 56, ಶಿವಮೊಗ್ಗ 608, ತೀರ್ಥಹಳ್ಳಿ 39 ಹೆಕ್ಟೇರ್‌ ಭೂಮಿಯಲ್ಲಿ ಮಾವನ್ನು ಬೆಳೆಯಲಾಗಿದ್ದು, ಸೊರಬ ಹಾಗೂ ಶಿಕಾರಿಪುರ ಹೊರತುಪಡಿಸಿ ಉಳಿದ ಕಡೆ ನಿರೀಕ್ಷಿತ ಮಟ್ಟದಲ್ಲಿ ಬೆಳೆ ಕಂಡುಬಂದಿಲ್ಲ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲೆ ವ್ಯಾಪ್ತಿ ಶಿಕಾರಿಪುರ, ಸೊರಬ ಹೊರತು ಪಡಿಸಿ ಉಳಿದ್ದೆಲ್ಲ ತಾಲೂಕಲ್ಲೂ ಈ ಬಾರಿ ಮಾವಿನ ಇಳುವರಿ ಕಡಿಮೆ ಬಂದಿದೆ. ಹೀಗಾಗಿ ಸಹಜವಾಗಿಯೇ ಬೆಲೆ ಹೆಚ್ಚಾಗಿದೆ. ಪ್ರಮುಖವಾಗಿ ತೋತಪುರಿ, ರಸಪುರಿ, ಸೇಂದೂರ, ಬದಾಮಿ, ಇತರೆ ತಳಿಯ ಹಣ್ಣುಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಈ ಪೈಕಿ ರಸಪುರಿ ತಳಿಯ ಮರಗಳ ಇಳುವರಿ ಕೊಂಚ ಹೆಚ್ಚಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲೆಯ ವಿವಿಧ ಭಾಗಗಳ ಮಾವಿನ ತೋಟಗಳಲ್ಲಿ ಈ ವರ್ಷ ಫಸಲು ಅಲ್ಪ ಪ್ರಮಾಣದಲ್ಲಿ ಕಂಡಿದ್ದು, ದೊರೆತಿರುವ ಅಲ್ಪ ಫಸಲು ಸಹ ಗಾಳಿ, ಮಳೆಗೆ ಸಿಕ್ಕಿದ್ದು ಫಸಲು ಕೈಹಿಡಿದೀತು ಎಂದು ಲೆಕ್ಕಾಚಾರ ಹಾಕಿ ಕುಳಿತಿದ್ದ ರೈತರಿಗೆ ಅಂದುಕೊಂಡಿದ್ದೇ ಒಂದು, ಆಗಿದ್ದೇ ಒಂದು ಎನ್ನುವಂತಾಗಿದ್ದು, ಕನಿಷ್ಟ ವೆಚ್ಚವಾದರೂ ದೊರಕಬಹುದು ಎಂಬ ಲೆಕ್ಕಾಚಾರ ತಲೆ ಕೆಳಗಾಗಿದೆ.

ಈಗಾಗಲೇ ಮಾರುಕಟ್ಟೆಗೆ ಮಾವು ಬರತೊಡಗಿದ್ದು, ಇಳುವರಿ ಕಡಿಮೆಯಾದ ಕಾರಣ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿರುವುದರಿಂದ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಕೃಷಿ ಕಾರ್ಮಿಕರ ಅಭಾವ ಸೇರಿದಂತೆ ಅನೇಕ ಕಾರಣದಿಂದ ರೈತರು, ತೋಟಗಾರಿಕಾ ಬೆಳೆಗಳತ್ತ ಮುಖ ಮಾಡಿದ್ದ ಜನರು ಹೆಚ್ಚಾಗಿ ಮಾವು ಬೆಳೆಗೆ ಮುಂದಾಗಿದ್ದರು. ಆದರೆ ಈ ಬಾರಿ ಬೆಳೆ ಕುಸಿತದಿಂದಾಗಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ದರದಲ್ಲಿ ಹೆಚ್ಚಳ: ಈ ಬಾರಿ ಮಾವು ಬೆಳೆ ಇಳಿಮುಖವಾಗಿದ್ದು ಮಾರುಕಟ್ಟೆಗೆ ಪೂರೈಕೆಯೂ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಬೆಲೆಯಲ್ಲಿ ವ್ಯತ್ಯಾಸವಾಗಿದೆ. ಕಳೆದ ಬಾರಿ 30ರಿಂದ 80ರೂ.ವರೆಗೆ ಮಾರಾಟವಾಗುತ್ತಿದ್ದ ಮಾವು, ಈ ಬಾರಿ 40ರಿಂದ 120ರವರೆಗೆ ಮಾರಾಟವಾಗುತ್ತಿದೆ.

ಬೇರೆಡೆಯಿಂದ ಆಮದು : ಜಿಲ್ಲೆಯಲ್ಲಿ ಮಾವು ಬೆಳೆ ಕೈಕೊಟ್ಟ ಕಾರಣ ಮಾವಿಗೆ ಬೇಡಿಕೆ ಹೆಚ್ಚಾಗಿದ್ದು, ಹಾಸನ, ಅರಸೀಕೆರೆ, ಬಾಣಾವರ ಭಾಗದಿಂದ ಹೆಚ್ಚಿನ ಮಾವಿನ ಹಣ್ಣುಗಳನ್ನು ನಗರಕ್ಕೆ ಅಮದು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಸುತ್ತಮುತ್ತಲಿನಿಂದ ಕಡಿಮೆ ಪ್ರಮಾಣದಲ್ಲಿ ವಿವಿಧ ಬಗೆಯ ಮಾವುಗಳು ಮಾರಾಟಕ್ಕೆ ಬರುತ್ತಿವೆ.

ಪ್ರಾರಂಭದಲ್ಲಿ ಮರಗಳಲ್ಲಿ ಹೆಚ್ಚಾಗಿಯೇ ಹೂವು ಕಚ್ಚಿದ್ದವು. ಆದರೆ ಅಕಾಲಿಕ ಮಳೆಯಿಂದಾಗಿ ಹೂವು ಸಮೇತ ಸಣ್ಣ ಕಾಯಿಗಳು ಅಧಿಕ ಪ್ರಮಾಣದಲ್ಲಿ ಉದುರಿದವು. ಹೀಗಾಗಿ ಈ ಬಾರಿ ಇಳುವರಿ ಕಡಿಮೆ ಬಂದಿದೆ.

Leave a Reply

Your email address will not be published. Required fields are marked