Radius: Off
Radius:
km Set radius for geolocation
Search

ಜನಶತಾಬ್ದಿ ರೈಲು 6 ದಿನಗಳ ಸಂಚಾರಕ್ಕೆ ಚಾಲನೆ

ಶಿವಮೊಗ್ಗ: ಶಿವಮೊಗ್ಗ-ಯಶವಂತಪುರ ನಡುವೆ ವಾರದಲ್ಲಿ 6 ದಿನಗಳ ಸಂಚಾರ ಆರಂಭಿಸಿದ ಜನಶತಾಬ್ದಿ ಎಕ್ಸ್​ಪ್ರೆಸ್ ರೈಲಿಗೆ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಗುರುವಾರ ಬೆಳಗ್ಗೆ ಶಿವಮೊಗ್ಗ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಬೆಳಗ್ಗೆ 5.15ಕ್ಕೆ ಶಿವಮೊಗ್ಗದಿಂದ ಹೊರಟು 10.15ಕ್ಕೆ ಯಶವಂತಪುರ ತಲುಪಲಿರುವ ಜನಶತಾಬ್ದಿ ಎಕ್ಸ್​ಪ್ರೆಸ್ ಈ ಮೊದಲು ವಾರದಲ್ಲಿ 3 ದಿನ ಸಂಚರಿಸುತ್ತಿತ್ತು. ಅದನ್ನು 6 ದಿನಗಳಿಗೆ ವಿಸ್ತರಿಸಲಾಗಿದೆ. ಮಂಗಳವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ಇದರ ಸೇವೆ ಲಭ್ಯವಾಗಲಿದೆ.

ಮಂಗಳವಾರ ಒಂದು ದಿನ ನಿರ್ವಹಣೆಗಾಗಿ ಈ ರೈಲನ್ನು ಸ್ಥಗಿತಗೊಳಿಸಲಾಗುವುದು. ಮಾರ್ಚ್ ಅಂತ್ಯದಲ್ಲಿ ಡಬ್ಲಿಂಗ್ ಕಾರ್ಯ ಪೂರ್ಣಗೊಳ್ಳಲಿದ್ದು, ಬಹುಜನರ ಬೇಡಿಕೆ ಮೇರೆಗೆ ಇದೇ ರೈಲು ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡುವಂತೆ ಕ್ರಮ ಕೈಗೊಳ್ಳಬೇಕು. 4 ತಾಸಿನಲ್ಲಿ ಬೆಂಗಳೂರು ತಲುಪುವಂತೆ ನೋಡಿಕೊಳ್ಳಬೇಕೆಂದು ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈಲ್ವೆ ವಲಯ ಸಮಿತಿ ಸದಸ್ಯ ಪುರುಷೋತ್ತಮ್ ತಿಳಿಸಿದ್ದಾರೆ.

ಈಗಾಗಲೇ ಲೋಕಸಭಾ ಸದಸ್ಯರು ತಿಳಿಸಿರುವಂತೆ ಶಿವಮೊಗ್ಗ-ತಿರುಪತಿ ಎಕ್ಸ್​ಪ್ರೆಸ್ ರೈಲು ಸಂಚಾರಕ್ಕೆ ವಿಶೇಷ ಪ್ರಯತ್ನ ನಡೆದಿದ್ದು, ಬೀರೂರು-ಬಳ್ಳಾರಿ ಮೂಲಕ ಇದು ತಿರುಪತಿ ತಲುಪಲಿದೆ. ಮೈಸೂರು ಇಂಟರ್​ಸಿಟಿ ರೈಲು ಸಮಯವನ್ನು ಪ್ರೀಪೋನ್ ಮಾಡಿ ಬೆಂಗಳೂರು ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಪ್ರಯತ್ನ ಮಾಡಲಾಗಿದೆ ಎಂದರು.

ಶಿವಮೊಗ್ಗದಿಂದ ಚೆನ್ನೈಗೆ ನೇರ ರೈಲು ಬಿಡುವ ಬೇಡಿಕೆ ಇಟ್ಟಿದ್ದು ಅದಕ್ಕೂ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಶಿವಮೊಗ್ಗ-ಚೆನ್ನೈಗೆ ರೈಲು ಸಂಚಾರ ಶುರುವಾಗಲಿದೆ ಎಂದು ಹೇಳಿದರು.

ಪ್ರಮುಖರಾದ ಉದಯ್ ಕುಮಾರ್, ಮಾಲತೇಶ್, ಹಿರಣ್ಣಯ್ಯ, ಎಸ್.ದತ್ತಾತ್ರಿ, ರೈಲ್ವೆ ಅಧಿಕಾರಿಗಳಾದ ಶರವಣ, ಕೆಂಚಾನಾಯ್ಕ, ಎಚ್.ವಿ.ನಾಗರಾಜ್, ಮಂಜುನಾಥ್ ಮತ್ತಿತರರಿದ್ದರು.

ವಿದ್ಯಾನಗರ ನಿಲ್ದಾಣಕ್ಕೆ ಭೇಟಿ :ಶಿವಮೊಗ್ಗ ವಿದ್ಯಾನಗರದ ರೈಲ್ವೆ ನಿಲ್ದಾಣಕ್ಕೆ ಗುರುವಾರ ನೈಋತ್ಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ವಿದ್ಯಾನಗರ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕೆಂಬ ಸಾರ್ವಜನಿಕರ ಬೇಡಿಕೆ ಮೇರೆಗೆ ಈ ನಿಲ್ದಾಣದ ಅಭಿವೃದ್ಧಿಗೆ ಈಗಾಗಲೇ ರೈಲ್ವೆ ಇಲಾಖೆ 1.43 ಕೋಟಿ ರೂ. ಬಿಡುಗಡೆ ಮಾಡಿದೆ. ಪ್ಲಾಟ್ ಫಾರಂ ಉದ್ದವನ್ನು 380 ಅಡಿಯಿಂದ 540 ಅಡಿಗೆ ವಿಸ್ತರಿಸಲಾಗಿದೆ. ಪ್ರಯಾಣಿಕರಿಗೆ ಆಸನದ ವ್ಯವಸ್ಥೆ, 3 ಶೌಚಗೃಹ, 3 ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.ನೈಋತ್ಯ ರೈಲ್ವೆ ವಲಯ ಸಮಿತಿ ಸದಸ್ಯ ಪುರುಷೋತ್ತಮ್ ಉದಯಕುಮಾರ್, ಕಮರ್ಷಿಯಲ್ ಇನ್ಸ್​ಪೆಕ್ಟರ್ ಮಂಜುನಾಥ್, ರೈಲ್ವೆ ಅಧಿಕಾರಿಗಳಾದ ಶರವಣ, ಕೆಂಚಾನಾಯ್ಕ, ಎಚ್.ವಿ.ನಾಗರಾಜ್ ಇತರರಿದ್ದರು.

Leave a Reply

Your email address will not be published. Required fields are marked