Radius: Off
Radius:
km Set radius for geolocation
Search

ಖ್ಯಾತ ಗಮಕಿ ಮಾರ್ಕಂಡೇಯ ಅವಧಾನಿ ನಿಧನ

ಶಿವಮೊಗ್ಗ: ಖ್ಯಾತ ಗಮಕಿ, ಕುಮಾರವ್ಯಾಸ ಪ್ರಶಸ್ತಿ ಪುರಸ್ಕೃತ ಮತ್ತೂರಿನ ಮಾರ್ಕಂಡೇಯ ಅವಧಾನಿ (86) ಬುಧವಾರ ರಾತ್ರಿ 11.30ರ ಅಂದಾಜಿಗೆ ನಿಧನರಾದರು. ಸಂಸ್ಕೃತ ಹಾಗೂ ವೇದದಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದ ಅವರು, ಮತ್ತೂರು-ಹೊಸಹಳ್ಳಿ ಅವಳಿ ಗ್ರಾಮಗಳ ಜನರ ಗೌರವಕ್ಕೆ ಪಾತ್ರರಾಗಿದ್ದರು. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಮತ್ತೂರಿನಲ್ಲಿ ನೆರವೇರಿತು.

ತಮ್ಮ ಕಂಚಿನ ಕಂಠದ ಮೂಲಕ ಗಮಕ ವ್ಯಾಖ್ಯಾನದಲ್ಲಿ ಗಮನಸೆಳೆದಿದ್ದ ಅವಧಾನಿಗಳು, ಹೊಸಹಳ್ಳಿ ಕೇಶವಮೂರ್ತಿ ಅವರೊಂದಿಗೆ ಹಲವು ವರ್ಷಗಳ ಕಾಲ ವಾಹಿನಿಯೊಂದರಲ್ಲಿ ಗಮಕ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಗಮಕಕ್ಕೆ ಹೊಸ ಆಯಾಮ ನೀಡಿದವರಲ್ಲಿ ಅವಧಾನಿಗಳೂ ಒಬ್ಬರಾಗಿದ್ದರು.

ನಿನ್ನೆಯಷ್ಟೇ ಸನ್ಯಾಸ ಸ್ವೀಕಾರ:ಬುಧವಾರ ಬೆಳಗ್ಗೆ ಅವಧಾನಿಗಳು ಸನ್ಯಾಸತ್ವ ಸ್ವೀಕರಿಸಿದ್ದರು. ಸದಾಶಿವಾನಂದ ಸ್ವಾಮೀಜಿ ಎಂದು ಯೋಗನಾಮ ಹೊಂದಿದ್ದರು. ಸನ್ಯಾಸತ್ವ ಸ್ವೀಕಾರ ಬಳಿಕ ಗ್ರಾಮದ ಎಲ್ಲ ದೇವಸ್ಥಾನಗಳಿಗೂ ತೆರಳಿ ನಮಸ್ಕಾರ ಸಲ್ಲಿಸಿದ್ದರು. ರಾತ್ರಿಯೇ ಕೊನೆಯುಸಿರೆಳೆಯುವ ಮೂಲಕ ಸಂಸ್ಕೃತ ಗ್ರಾಮದಲ್ಲಿ ನೀರವ ಮೌನ ಸೃಷ್ಟಿಯಾಯಿತು. ಇವರ ಸಾಧನೆಯನ್ನು ಗುರುತಿಸಿ ನಾಡಿನ ವಿವಿಧ ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ರಾಜ್ಯ ಗಮಕ ಸಮ್ಮೇಳನದ ಅಧ್ಯಕ್ಷತೆಯನ್ನೂ ನಿರ್ವಹಿಸಿದ್ದರು. ಮೃತರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್, ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ನಟರಾಜ್ ಭಾಗವತ್, ಹೆಬ್ಬಳ್ಳಿಯ ದತ್ತಾವಧೂತರು ಸೇರಿ ಹಲವು ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು.

Leave a Reply

Your email address will not be published. Required fields are marked