Radius: Off
Radius:
km Set radius for geolocation
Search

‘ಕೈ ಉತ್ಪನ್ನಕ್ಕೆ ಜಿಎಸ್‌ಟಿ ರದ್ದು ಮಾಡದ ಕೇಂದ್ರ’

ಸಾಗರ : ಕೈಉತ್ಪನ್ನಗಳ ಮೇಲೆ ವಿಧಿಸಿದ್ದ ಬರ್ಬರವಾದ ಜಿಎಸ್‌ಟಿಯನ್ನು ಹಿಂತೆಗೆದುಕೊಳ್ಳವುದಾಗಿ, ಶೂನ್ಯ ತೆರಿಗೆಯ ವ್ಯವಸ್ಥೆಗೆ ಇಪ್ಪತ್ತೊಂಬತ್ತು ಕೈಉತ್ಪನ್ನಗಳನ್ನು ತರುವುದಾಗಿ ನೀಡಿದ್ದ ವಚನವನ್ನು ಕೇಂದ್ರದ ಬಿಜೆಪಿ ಸರಕಾರ ಮರೆತಿದೆ ಎಂದು ಗ್ರಾಮ ಸೇವಾ ಸಂಘದ ಪ್ರಮುಖ, ದೇಸಿ ಚಿಂತಕ ಪ್ರಸನ್ನ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ರಾಮರಾಜ್ಯವನ್ನು ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಕೇಂದ್ರದ ಹಣಕಾಸು ಸಚಿವರು ಈ ಬಗ್ಗೆ, ಜನವರಿಯಲ್ಲಿ ನೀಡಿದ್ದ ಬಹಿರಂಗ ಹೇಳಿಕೆ ಕೇವಲ ಹೇಳಿಕೆಗೆ ಸೀಮಿತವಾಗಿದೆ. ಕರ್ನಾಟಕವೂ ಸೇರಿದಂತೆ ದೇಶದ 7 ರಾಜ್ಯಗಳು ವಿರೋಧಿಸಿದ ಹಿನ್ನೆಲೆಯಲ್ಲಿ ವಿತ್ತ ಸಚಿವರು ನೀಡಿದ್ದ ಭರವಸೆ 3 ತಿಂಗಳು ಕಳೆದರೂ ಈಡೇರಿಲ್ಲ. ಮೊದಲೇ ನಲುಗಿಹೋಗಿದ್ದ ಗ್ರಾಮೀಣ ಉತ್ಪಾದಕರು ಈಗ ನೆಲಕಚ್ಚಿ ಹೋಗಿದ್ದಾರೆ ಎಂದರು.

ದೇಶದ ಒಟ್ಟು ಉತ್ಪಾದಕತೆಯಲ್ಲಿ ಅರವತ್ತು ಪ್ರತಿಶತ ಉತ್ಪಾದಕತೆಯನ್ನು ಗ್ರಾಮೀಣ ಕ್ಷೇತ್ರ ನಿಭಾಯಿಸುತ್ತದೆ. ಮಳೆ ಆಧಾರಿತ ಕೃಷಿ, ಕೈಮಗ್ಗ ನೇಕಾರಿಕೆ, ಕುಶಲಕರ್ಮ, ಸುಸ್ಥಿರ ಹೈನುಗಾರಿಕೆ, ಪಾರಂಪರಿಕ ಮೀನುಗಾರಿಕೆ, ಕುಂಬಾರಿಕೆ, ಕಮ್ಮಾರಿಕೆ ಇತ್ಯಾದಿ ಕ್ಷೇತ್ರಗಳ ಬಡ ಜನರು ಈ ತೆರಿಗೆಗಿಂತ ಮಿಗಿಲಾಗಿ ಅವರು, ತರಿಗೆ ವ್ಯವಸ್ಥೆಯ ಭಾರ, ಪರಕೀಯ ಭಾಷೆಯ ಭಾರ, ಕಂಪ್ಯೂಟರೀಕರಣದ ಭಾರ, ತೆರಿಗೆ ಅಧಿಕಾರಿಗಳ ಕಿರುಕುಳ, ಸಾಗಣೆಯಲ್ಲಿ ಆಗುತ್ತಿರುವ ಉಪಟಳ, ಕಚ್ಚಾಮಾಲು ಪೂರೈಕೆಯಲ್ಲಾಗಿರುವ ಅಡಚಣೆ, ಮಧ್ಯವರ್ತಿಗಳ ಕಾಟ, ಭ್ರಷ್ಟಾಚಾರದ ಸಾಲ ಇತ್ಯಾದಿಗಳಿಂದ ಸೊರಗಿದ್ದಾರೆ. ಶೂನ್ಯ ತೆರಿಗೆಯಿಂದ ನೂರಾರು ಗ್ರಾಮೀಣ ಸಹಕಾರಿ ಸಂಸ್ಥೆಗಳು ಬೆಳೆಯಲು ಅವಕಾಶವಾಗುತ್ತದೆ. ಲಕ್ಷಾಂತರ ಗ್ರಾಮೀಣ ಮಹಿಳೆಯರು ಸುಸ್ಥಿರವಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ಜಜಿಯಾ ತೆರಿಗೆ: ಜಿಎಸ್‌ಟಿಯನ್ನು ನಾವು ಜಜಿಯಾ ತೆರಿಗೆ ಎಂದು ಕರೆಯುತ್ತೇವೆ. ಪರಿಸರ, ಪ್ರಕೃತಿ ಹಾಗೂ ನೈತಿಕತೆಗಳಿಗೆ ಮಾರಕವಾಗಿರುವ ಕೈಗಾರಿಕಾ ಉತ್ಪನ್ನಗಳು ಸರಕಾರಕ್ಕೆ ಈ ತಪ್ಪು ಕಾಣಿಕೆ ನೀಡುವುದರಲ್ಲಿ ಅರ್ಥವಿದೆ. ಆದರೆ, ಕೈಉತ್ಪನ್ನಗಳ ಮೇಲೆ ತರಿಗೆ ವಿಧಿಸಿ ಬಿಜೆಪಿ ಸರಕಾರವು ಅಕ್ಷ ಮ್ಯ ಅಪರಾಧ ಮಾಡಿದೆ. ರಾಜ್ಯದ 7 ಜಿಲ್ಲೆಗಳ ನೇಕಾರರು ತಮ್ಮ ಸರಕುಗಳನ್ನು ಲಾರಿಗಳಿಗೆ ಹಾಕಲೇ ಆಗುತ್ತಿಲ್ಲ. ಮಂಡಿಗಳಲ್ಲಿ ಜಿಎಸ್‌ಟಿ ಕಡಿತಗೊಳಿಸಿ ಹಣ ನೀಡುತ್ತಾರೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿಯೂ ದೇಸಿ ಮಳಿಗೆಯಲ್ಲಿ ವ್ಯಾಪಾರ ಕುಸಿದಿರಲಿಲ್ಲ. ಆದರೆ ಈಗ ವ್ಯಾಪಾರ ಕುಸಿದಿದೆ ಎಂದರು.

ಶೂನ್ಯ ಕರ ವ್ಯವಸ್ಥೆ ಜಾರಿಗೆ ಬಂದರೆ ಗ್ರಾಮೀಣ ಕೈಉತ್ಪಾದಕರು ಸಂಘಟಿತರಾಗಿ ನಗರ ಮಾರುಕಟ್ಟಯನ್ನು ಯಶಸ್ವಿಯಾಗಿ ಪ್ರವೇಶಿಸಲು ಸಾಧ್ಯ ಎಂಬ ಉದ್ದೇಶದಿಂದ ಗ್ರಾಮ ಸೇವಾ ಸಂಘವು ಜಿಎಸ್‌ಟಿ ವಿರೋಧಿ ಹೋರಾಟ ನಡೆಸಿಕೊಂಡು ಬಂದಿದೆ. ಕೇಂದ್ರ ಸರಕಾರ ತಕ್ಷ ಣದಲ್ಲಿ ತನ್ನ ವಚನ ಪೂರೈಸದೆ ಹೋದರೆ ಗ್ರಾಮೀಣ ಬಡವರ ಕೆಂಗಣ್ಣಿನ ಕೋಪಕ್ಕೆ ಅದು ಗುರಿಯಾಗಲಿದೆ. ಹೋರಾಟವು ಹೆಚ್ಚು ವಿಸ್ತೃತವಾಗಿ ಮೇಲೆದ್ದು ಬರಲಿದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked