Radius: Off
Radius:
km Set radius for geolocation
Search

ಕಡಿಮೆ ದರದಲ್ಲಿ ಬಡವರಿಗೆ ಔಷಧ ವಿತರಣೆ

ಶಿವಮೊಗ್ಗ: ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸಲಾಗುತ್ತಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲ ಕಲ್ಪಿಸಿರುವುದು ಕೇಂದ್ರ ಸರ್ಕಾರದ ಸಾಧನೆಗಳಲ್ಲೊಂದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಜೆನರಿಕ್ ಔಷಧ ಫಲಾನುಭವಿಗಳೊಂದಿಗೆ ಪ್ರಧಾನಿ ಸಂವಾದ ಬಳಿಕ ಶಿವಮೊಗ್ಗ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜೆನರಿಕ್ ಔಷಧ ಮಳಿಗೆಗಳಲ್ಲಿ ಕೆಲ ಔಷಧಗಳು ಶೇ.85ಕ್ಕೂ ಕಡಿಮೆ ದರದಲ್ಲಿ ದೊರೆಯುತ್ತಿವೆ. ಇದರಿಂದ ಜನರ ಆರೋಗ್ಯ ಸುಧಾರಣೆಗೆ ಒತ್ತು ನೀಡಿದಂತಾಗಿದೆ ಎಂದರು.

ಜನರ ಆರೋಗ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚು ಕಾಳಜಿ ವಹಿಸಿದೆ. 1.5 ಲಕ್ಷ ರೂ. ಬೆಲೆಯ ಸ್ಟಂಟ್ ಕೇವಲ 18 ಸಾವಿರಕ್ಕೆ ಸಿಗುವಂತಾಗಿದೆ. ಪ್ರಸ್ತುತ ಜನೌಷಧ ಮಳಿಗೆ ಮೂಲಕ 1,650 ಬಗೆಯ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಔಷಧಗಳು ಕಡಿಮೆ ಬೆಲೆಯಲ್ಲಿ ಸಿಗಲಿವೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಮೂಲಕ ಬಿಪಿಎಲ್ ಪಡಿತರ ಕುಟುಂಬಕ್ಕೆ 5 ಲಕ್ಷ ರೂ. ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 1.5 ಲಕ್ಷ ರೂ.ವರೆಗೆ ಆರೋಗ್ಯ ವಿಮೆ ಒದಗಿಸಲಾಗುತ್ತಿದೆ ಎಂದು ತಿಳಿಸಿದ ಬಿ.ವೈ.ರಾಘವೇಂದ್ರ, ಜನೌಷಧ ಕೇಂದ್ರ ತೆರೆಯುವುದೂ ಕೂಡ ಸಮಾಜ ಸೇವೆಯ ಒಂದು ಭಾಗ ಎಂದು ಅಭಿಪ್ರಾಯಪಟ್ಟರು.

ಡ್ರಗ್ಸ್ ಕಂಟ್ರೋಲರ್ ವೀರೇಶ್ ಬಾಬು ಮಾತನಾಡಿ, ಕೇಂದ್ರ ಸರ್ಕಾರ ಜನೌಷಧ ಕೇಂದ್ರ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲೆಯಲ್ಲಿ ಒಟ್ಟು 25 ಕೇಂದ್ರಗಳಿದ್ದು, ಶಿವಮೊಗ್ಗ ನಗರದಲ್ಲೇ 9 ಜನೌಷಧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಜನೌಷಧ ಕೇಂದ್ರಗಳ ಮೂಲಕ ಪ್ರಸ್ತುತ 70ಕ್ಕಿಂತ ಹೆಚ್ಚು ಔಷಧಗಳು ಪೂರೈಕೆಯಾಗುತ್ತಿದ್ದು, ಇವುಗಳು ಉತ್ತಮ ಗುಣಮಟ್ಟ ಹೊಂದಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಇನ್ನೂ ಹೆಚ್ಚಿನ ಔಷಧಗಳಿಗೆ ಬೇಡಿಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ತರಿಸುವ ಉದ್ದೇಶವಿದೆ ಎಂದರು. ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳಾದ ಮಂಜುನಾಥ ರೆಡ್ಡಿ, ನಂದಿನಿ, ಎಪಿಎಂಸಿ ಸದಸ್ಯ ಎಸ್.ಎಸ್.ಜ್ಯೋತಿಪ್ರಕಾಶ್ ಇದ್ದರು.

Leave a Reply

Your email address will not be published. Required fields are marked