ಇನ್ನೂ ಐದು ಬಾರಿ ಮತ ಚಲಾಯಿಸಲು ಸಿದ್ಧರಾಗಿ

ಇನ್ನೂ ಐದು ಬಾರಿ ಮತ ಚಲಾಯಿಸಲು ಸಿದ್ಧರಾಗಿ

ಶಿವಮೊಗ್ಗ: ಮಾನ್ಯ ಮತದಾರ ಬಾಂಧವರೆ, ವಿಧಾನಸಭೆ ಚುನಾವಣೆ ಮುಗಿಯಿತು, ಮತ ಚಲಾಯಿಸುವ ಮೂಲಕ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಮಾಡಿ ಮುಗಿಸಿದ್ದೇವೆ ಎಂದು ನೀವು ‘ನಿರಾಳ’ರಾಗುವಂತಿಲ್ಲ. ಮುಂದಿನ ಹನ್ನೆರಡು ತಿಂಗಳ ಅವಧಿಯಲ್ಲಿ ಇನ್ನೂ ನಾಲ್ಕೈದು ಬಾರಿ ನೀವು ‘ಪವಿತ್ರ’ ಮತ ಚಲಾಯಿಸಬೇಕಿದೆ. ಅದಕ್ಕೆ ನೀವು ಸಿದ್ದರಾಗಬೇಕಿದೆ.

ಹೇಳಿಕೇಳಿ ಇದು ಚುನಾವಣೆ ಪರ್ವಕಾಲ. ವಿಧಾನಸಭೆ ಚುನಾವಣೆ ಅರ್ಭಟ ತಣ್ಣಗಾಗುವಷ್ಟರಲ್ಲಿ ವಿಧಾನಪರಿಷತ್‌ನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಅಧಿಸೂಚನೆ ಹೊರಬಿದ್ದಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿರುವ ಹಾಲಿ ವಿಧಾನಪರಿಷತ್‌ ಸಭಾಪತಿಯೂ ಆಗಿರುವ ಡಿ.ಎಚ್‌.ಶಂಕರಮೂರ್ತಿ ಹಾಗೂ ಶಿಕ್ಷಕ ಕ್ಷೇತ್ರದ ಕ್ಯಾ.ಗಣೇಶ್‌ ಕಾರ್ಣಿಕ್‌ ಅವರ ಅವಧಿ ಮುಕ್ತಾಯಗೊಳ್ಳಲಿದ್ದು, ಅವೆರಡೂ ಕ್ಷೇತ್ರಗಳಿಗೆ ಜೂನ್‌ 9 ರಂದು ಮತದಾನ ನಡೆಯಲಿದೆ. ಬುಧವಾರದಿಂದಲೇ ನೀತಿ ಸಂಹಿತೆಯೂ ಜಾರಿಯಾಗಿದೆ.

ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಶಿವಮೊಗ್ಗದವರೇ ಆದ ಎಸ್‌.ಪಿ.ದಿನೇಶ್‌ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಸಂಸದ ಆಯನೂರು ಮಂಜುನಾಥ್‌, ಶಿಕ್ಷಕ ಕ್ಷೇತ್ರದಿಂದ ಬಿಆರ್‌ಪಿಯ ರಮೇಶ್‌ ಸ್ಪರ್ಧಿಸುತ್ತಿರುವುದರಿಂದ ಸಹಜವಾಗಿಯೇ ಜಿಲ್ಲೆಯಲ್ಲಿ ಚುನಾವಣೆ ‘ಕಣ’ ರಂಗೇರಲಿದೆ. ಅದೂ ಅಲ್ಲದೇ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲೇ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಪದವೀಧರ ಮತದಾರರು ಇರುವುದರಿಂದ ಇಲ್ಲಿನ ರಾಜಕೀಯ ಚಟುವಟಿಕೆ ಗರಿಗೆದರಲಿದೆ.

ಸಂಸತ್‌ಗೆ ಮತ್ತೊಮ್ಮೆ ಓಟು:

ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಿರುವ ಬಿ.ಎಸ್‌.ಯಡಿಯೂರಪ್ಪ ಅವರು ಇದುವರೆಗೂ ಪ್ರತಿನಿಧಿಸುತ್ತಿದ್ದ ಲೋಕಸಭೆ ಸ್ಥಾನಕ್ಕೆ ಮುಂದಿನ 15 ದಿವಸದೊಳಗೆ ರಾಜೀನಾಮೆ ನೀಡಬೇಕಿದೆ. ಲೋಕಸಭೆಗೆ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂದು ವರ್ಷ ಇರುವುದರಿಂದ ಉಪಚುನಾವಣೆ ನಡೆಯುವುದು ಅನಿವಾರ್ಯವಾಗಲಿದೆ. ಬಿಎಸ್‌ವೈ ರಾಜೀನಾಮೆ ನಂತರದ ಆರು ತಿಂಗಳ ಒಳಗೆ ಉಪಚುನಾವಣೆ ನಡೆಯಬೇಕಿದೆ.

ಬಿಎಸ್‌ವೈ ರಾಜೀನಾಮೆ ನಂತರ ಯಾವತ್ತೂ ಬೇಕಾದರೂ ಚುನಾವಣೆ ಘೋಷಣೆಯಾಗಬಹುದು. ಹಾಗಾಗಿ ಮತ್ತೇ ಮಹಾ’ಹಣಾಹಣಿ’ಗೆ ಶಿವಮೊಗ್ಗ ಜಿಲ್ಲೆ ಸಿದ್ಧವಾಗಲೇ ಬೇಕಿದೆ. ಬಳ್ಳಾರಿ ಸಂಸದ ಶ್ರೀರಾಮುಲು ಕೂಡ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿರುವುದರಿಂದ ಅವರ ಸಂಸತ್‌ ಸ್ಥಾನಕ್ಕೂ ರಾಜೀನಾಮೆ ಕೊಡಬೇಕಾಗುತ್ತದೆ. ಹಾಗಾದಲ್ಲಿ ಎರಡೂ ಕ್ಷೇತ್ರಕ್ಕೂ ಒಟ್ಟಿಗೆ ಚುನಾವಣೆ ನಡೆಯಲಿದ್ದು, ಇವೆರಡೂ ಕ್ಷೇತ್ರಗಳೂ ಸಹಜವಾಗಿಯೇ ಕಾಂಗ್ರೆಸ್‌- ಬಿಜೆಪಿಗೆ ಪ್ರತಿಷ್ಠೆಯ ಕಣವಾಗುವುದರಿಂದ ಶಿವಮೊಗ್ಗದಲ್ಲಿ ಚುನಾವಣೆ ‘ಜ್ವರ’ 104 ಡಿಗ್ರಿಗೆ ಏರುವುದರಲ್ಲಿ ಅನುಮಾನವಿಲ್ಲ.

ಶಿವಮೊಗ್ಗ ಪಾಲಿಕೆ ಗುದ್ದಾಟ:

ಇಷ್ಟರ ನಡುವೆ ಶಿವಮೊಗ್ಗ ಮಹಾನಗರ ಪಾಲಿಕೆ ಅವಧಿಯೂ ಮುಕ್ತಾಯವಾಗಲಿದ್ದು, ಅದಕ್ಕೂ ಚುನಾವಣೆ ನಡೆಯಬೇಕಿದೆ. ವಿಧಾನಸಭೆ ಚುನಾವಣೆ ಪ್ರಚಾರ ಪಾಲಿಕೆ ಚುನಾವಣೆ ಹಾದಿಯನ್ನು ಸುಗಮ ಮಾಡಿದೆ. ಪಾಲಿಕೆ ಚುನಾವಣೆ ಲೆಕ್ಕಾಚಾರ ಇಟ್ಟುಕೊಂಡೇ ಕೆಲ ಸ್ಥಳೀಯ ನಾಯಕರು ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಪಾಲಿಕೆ ಚುನಾವಣೆಯಲ್ಲಿ ಮೂರು ಪಕ್ಷಗಳಿಗೂ ಸ್ಪಷ್ಟ ಬಹುಮತ ದೊರಕದೇ ಇದ್ದ ಕಾರಣ ಐದು ವರ್ಷ ಕಿಚಡಿ ಆಡಳಿತವೇ ನಡೆದಿದೆ. ಕಾಂಗ್ರೆಸ್‌- ಜೆಡಿಎಸ್‌, ಬಿಜೆಪಿ- ಜೆಡಿಎಸ್‌ ಸಮ್ಮಿಶ್ರ ಆಡಳಿತವನ್ನು ಶಿವಮೊಗ್ಗ ನಗರ ಕಂಡಿದೆ. ಈ ಅನುಭವದ ಆಧಾರದ ಮೇಲೆ ಪಾಲಿಕೆ ಚುನಾವಣೆ ನಡೆಯಲಿರುವುದರಿಂದ ಹಿಂದಿಗಿಂತಲೂ ‘ಕದನ’ ಗಮನ ಸೆಳೆಯಲಿದೆ.

ಶಿವಮೊಗ್ಗ ಪಾಲಿಕೆ ಆಡಳಿತದ ಹಕ್ಕುದಾರಿಕೆ ಪಡೆಯುವಲ್ಲಿ ಮೂರು ಪಕ್ಷಗಳೂ ಮುಗಿಬೀಳುವುದರಿಂದ ಆ ಚುನಾವಣೆ ‘ಅಖಾಡ’ ಉಳಿದೆಲ್ಲಾ ಚುನಾವಣೆಗಳಿಗಿಂತಲೂ ಹೆಚ್ಚು ಕುತೂಹಲಕ್ಕೆ ಕಾರಣವಾಗಲಿದೆ. ಸ್ಥಳೀಯ ಮಟ್ಟದ ನಾಯಕರ ಅಸ್ತಿತ್ವದ ಈ ಚುನಾವಣೆ ವಾರ್ಡ್‌ಮಟ್ಟದಲ್ಲೇ ‘ಜಂಗೀಕುಸ್ತಿ’ ನಡೆಯಲಿರುವುದರಿಂದ ಮತದಾರನ ಮನೆಯ ಹೊಸ್ತಿಲವರೆಗೂ ಚುನಾವಣೆ ‘ಗುದ್ದಾಟ’ದ ಬಿಸಿ ತಟ್ಟಲಿದೆ.

ಮುಂದಿನ ಆರು ತಿಂಗಳ ಒಳಗೆ ಈ ಮೂರು ಚುನಾವಣೆ ನಡೆಯೋದು ಗ್ಯಾರಂಟಿ. ಅಲ್ಲಿಗೆ ಶಿವಮೊಗ್ಗದ ಚುನಾವಣೆ ಪರ್ವ ಮುಕ್ತಾಯಗೊಳ್ಳುವುದಿಲ್ಲ. ಅಲ್ಲಿಂದ ಮುಂದೆ ಲೋಕಸಭೆಯ ಸಾರ್ವತ್ರಿಕ ಚುನಾವಣೆಯ ಲೆಕ್ಕಾಚಾರ ಆರಂಭವಾಗಲಿದೆ. ಲೋಕಸಭೆ ಅವಧಿ ಮುಂದಿನ ಮೇ ತಿಂಗಳಿಗೆ ಮುಕ್ತಾಯಗೊಳ್ಳಲಿದ್ದು, 2018ರ ಡಿಸೆಂಬರ್‌ ನಂತರ ಆ ಚುನಾವಣೆಯ ‘ಗಡಿಬಿಡಿ’ ಆರಂಭವಾಗಲಿದೆ.

ನೀತಿ ಸಂಹಿತೆ ತಲೆಬಿಸಿ

ಅಭಿವೃದ್ಧಿ ಕಾರ್ಯ ನಾಸ್ತಿ

ಬಹುಶಃ ಚುನಾವಣೆ ಸಂದರ್ಭದಲ್ಲಿ ಮತದಾರನಿಗೆ ತಲೆಬಿಸಿ ಮಾಡುವುದು ‘ನೀತಿ ಸಂಹಿತೆ’. ಮುಂದಿನ ಒಂದು ವರ್ಷ ಕಾಲ ಜನತೆಯನ್ನು ಚುನಾವಣೆ ‘ನೀತಿ ಸಂಹಿತೆ ‘ಕಾಡಲಿದೆ. ಈಗಾಗಲೇ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರಿ ಸುಮಾರು ಒಂದೂವರೆ ತಿಂಗಳು ನೀತಿಸಂಹಿತೆ ಜಾರಿಯಲ್ಲಿತ್ತು. ಈ ಅವಧಿಯಲ್ಲಿ ಬಹುತೇಕ ಕಾರ್ಯಾಂಗ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಅಭಿವೃದ್ಧಿ ಕಾರ್ಯ ಕುಂಠಿತಗೊಂಡಿದೆ. ಶಿಕ್ಷಕ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಬುಧವಾರದಿಂದಲೇ ಜಾರಿಯಾಗಿದೆ. ಇದರಿಂದ ಜೂನ್‌ 9ರವರೆಗೂ ಜಿಲ್ಲೆಯಲ್ಲಿ ಹೊಸ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಇಲ್ಲ. ಲೋಕಸಭೆಗೆ ಉಪ ಚುನಾವಣೆ ನಡೆದರೆ ಜಿಲ್ಲೆಯಲ್ಲಿ ಸುಮಾರು ಒಂದೂವರೆ ತಿಂಗಳ ಕಾಲ ನೀತಿ ಸಂಹಿತೆ ಅನುಷ್ಠಾನಗೊಳ್ಳಲಿದೆ. ಹಾಗಾಗಿ ಮತ್ತೆ ಅಭಿವೃದ್ಧಿಗೆ ಅಡತಡೆ ಎದುರಾಗಲಿದೆ. ಪಾಲಿಕೆ ಚುನಾವಣೆ ಘೋಷಣೆಯಾದರೆ ಶಿವಮೊಗ್ಗ ನಗರದ ಮಟ್ಟಿಗೆ ನೀತಿ ಸಂಹಿತೆ ಜಾರಿಯಾಗುವುದರಿಂದ ನಗರದಲ್ಲಿ ಅಭಿವೃದ್ಧಿ ‘ನಾಸ್ತಿ’. ಬಹುಶಃ ಮುಂದಿನ ಒಂದು ವರ್ಷದ ಕಾಲ ‘ನೀತಿ ಸಂಹಿತೆ’ ಶಿವಮೊಗ್ಗದ ‘ಅಭಿವೃದ್ಧಿ’ ಕೆಲಸದ ಮೇಲೆ ‘ಪರಿಣಾಮ’ ಬೀರುವುದಂತೂ ಹೌದು.

Leave a Reply

Your email address will not be published. Required fields are marked