Radius: Off
Radius:
km Set radius for geolocation
Search

ಅನುಮತಿಗೆ ವಿಶೇಷ ಕೌಂಟರ್ ಆರಂಭ

ಅನುಮತಿಗೆ ವಿಶೇಷ ಕೌಂಟರ್ ಆರಂಭ

ಸಾಗರ: ರಾಜಕೀಯ ಪಕ್ಷಗಳು ಸಭೆ, ಸಮಾರಂಭಗಳಿಗೆ 48 ಗಂಟೆ ಮುಂಚಿತವಾಗಿ ಅನುಮತಿ ಪಡೆಯುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದ್ದು ಏಕಗವಾಕ್ಷಿ ಮೂಲಕ ವಿವರ ಪಡೆಯಹುದು ಎಂದು ಉಪವಿಭಾಗಾಧಿಕಾರಿ ಎಚ್.ವಿ. ದರ್ಶನ್ ಹೇಳಿದರು.

ಕಚೇರಿಯಲ್ಲಿ ಈ ಕುರಿತು ಗುರುವಾರ ಮಾಹಿತಿ ನೀಡಿದ ಅವರು, ಚುನಾವಣೆ ದಿನಾಂಕ ಘೊಷಣೆಯಾದ ದಿನದಿಂದ ನೀತಿಸಂಹಿತೆ ಜಾರಿಯಾಗಿದೆ. ಮದುವೆ, ಇತರೆ ಧಾರ್ವಿುಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕಾದ ಅವಶ್ಯಕತೆ ಇಲ್ಲ. ಆದರೆ ಕಾರ್ಯಕ್ರಮದ ಬಗ್ಗೆ ವಿವರ ನೀಡುವುದು ಒಳಿತು ಎಂದರು.

ಆಯಕಟ್ಟಿನ ಜಾಗಗಳಲ್ಲಿ ನಾಕಾಬಂದಿ ಮಾಡಲಾಗುತ್ತದೆ. ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನ ಚುನಾವಣಾ ಅಧಿಕಾರಿಗಳಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಸಹಕರಿಸಬೇಕು ಎಂದರು.

ಈಗಾಗಲೇ ರಾಜಕೀಯ ಮುಖಂಡರ ಭಾವಚಿತ್ರಗಳಿರುವ ಪೋಸ್ಟರ್, ಬ್ಯಾನರ್​ಗಳನ್ನು ತೆರವು ಮಾಡಲಾಗಿದೆ. ರಾಜಕೀಯ ಪಕ್ಷಗಳೂ ಅಂತಹ ಬ್ಯಾನರ್​ಗಳನ್ನು ಹಾಕಿಕೊಳ್ಳುವಂತಿಲ್ಲ. ಯಾರದ್ದೇ ಭಾವಚಿತ್ರವನ್ನು ಬಳಸುವಾಗ ಅವರ ಅನುಮತಿ ಪಡೆದಿರಬೇಕು. ಚುನಾವಣೆ ಸಂದರ್ಭದಲ್ಲಿ ಮರಳು ಸಾಗಣೆಗೆ ಅನುಮತಿ ಅವಶ್ಯಕತೆ ಇಲ್ಲ ಎಂಬ ವದಂತಿ ಹರಡಿದ್ದು ನಮ್ಮ ಗಮನಕ್ಕೆ ಬಂದಿದೆ. ಚುನಾವಣೆ ನೀತಿಸಂಹಿತೆ ಜಾರಿಯಿದ್ದರೂ ಸರ್ಕಾರದ ಎಲ್ಲ ಅನುಮತಿಗಳನ್ನೂ ಪಡೆದೇ ಮರಳು ಸಾಗಿಸಬೇಕು ಎಂದು ಹೇಳಿದರು.

ಕರ್ತವ್ಯ ನಿರ್ವಹಿಸುವ ಚುನಾವಣೆ ಅಧಿಕಾರಿಗಳಿಗೂ ತಪಾಸಣೆ, ಇನ್ನಿತರ ಸಂದರ್ಭಗಳಲ್ಲಿ ತಾಳ್ಮೆಯಿಂದ ವರ್ತಿಸಲು ಸೂಚಿಸಿದ್ದೇವೆ. ಏನಾದರೂ ಸಮಸ್ಯೆಗಳಾದರೆ ಏಕಗವಾಕ್ಷಿಯನ್ನು ಸಂರ್ಪಸಬಹುದು. ಯಾವುದಾದರೂ ಜಾತ್ರೆ, ಹಬ್ಬ ಇಂತಹ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸಿ ಭಾಷಣ ಮಾಡುವುದು, ಕರಪತ್ರ ಹಂಚುವುದು, ಸೀರೆ-ಬಟ್ಟೆ ಮುಂತಾದವುಗಳನ್ನು ನೀಡಿ ಮತದಾರರಿಗೆ ಆಮಿಷ ಒಡ್ಡುವುದು ಕಂಡುಬಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದ ಪ್ರತಿನಿಧಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಂದರ್ಭವಿದ್ದರೆ ಮುಂಚಿತವಾಗಿ ಏಕಗವಾಕ್ಷಿಗೆ ಮಾಹಿತಿ ನೀಡಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ 24 ಗಂಟೆ ಸುವಿಧಾ ಏಕಗವಾಕ್ಷಿ ಕಾರ್ಯನಿರ್ವಹಿಸುತ್ತದೆ. ಜನರ ಯಾವುದೇ ದೂರುಗಳಿದ್ದರೂ ಸ್ವೀಕರಿಸಲಾಗುತ್ತದೆ. ಸಾರ್ವಜನಿಕರು, ವಿವಿಧ ರಾಜಕೀಯ ಪಕ್ಷದ ಕಾರ್ಯಕರ್ತರು ಲೋಕಸಭೆ ಚುನಾವಣೆ ಶಾಂತ ರೀತಿಯಿಂದ ನಡೆಯಲು ಸಹಕರಿಸಬೇಕು ಎಂದು ಹೇಳಿದರು.

Leave a Reply

Your email address will not be published. Required fields are marked